ದಿಲೀಪ
ಸೂರ್ಯವಂಶದ ಸಗರ ಚಕ್ರವರ್ತಿಯ ಮೊಮ್ಮಗ, ಅಂಶುಮಂತನ ಮಗ. ಹೆಂಡತಿ ಸುದಕ್ಷಿಣೆ. ಖಟ್ವಾಂಗನೆಂದೂ ಈತನನ್ನು ಕರೆವುದಿದೆ. ಈತನ ಮಗ ಭಗೀರಥ. ಈತ ಬಹು ದೊಡ್ಡ ಯಜ್ಞವನ್ನು ಮಾಡಿದ. ಅದರಲ್ಲಿ ವಿಶ್ವಾವಸು ಮೊದಲಾದ ಅರವತ್ತು ಸಾವಿರ ಗಂಧರ್ವರು ಗಾಯನ ಮಾಡಿದರು. ಒಮ್ಮೆ ಈತ ದೇವದಾನವಯುದ್ಧದಲ್ಲಿ ಇಂದ್ರನ ಬೆಂಬಲಕ್ಕೆ ಹೋದ. ಹಿಂತಿರುಗುವಾಗ ಇಂದ್ರಲೋಕದಲ್ಲಿ ಕಲ್ಪವೃಕ್ಷದ ಕೆಳಗೆ ಮಲಗಿದ್ದ ಕಾಮಧೇನುವಿಗೆ ನಮಸ್ಕರಿಸದೇ ಬಂದುದರಿಂದ ಕೋಪಾವಿಷ್ಟಳಾದ ಕಾಮಧೇನು ಮಕ್ಕಳಾಗದಿರುವಂತೆ ಶಾಪ ಕೊಟ್ಟಳು. ಬಹಳ ಕಾಲದವರೆಗೆ ಮಕ್ಕಳನ್ನು ಕಾಣದ ಈತ ತನ್ನ ಹೆಂಡತಿಯೊಡನೆ ವಸಿಷ್ಠನ ಹೋಮಧೇನು (ಕಾಮಧೇನುವಿನ ಮಗಳು) ನಂದಿನಿಯನ್ನು ಪೂಜಿಸಿ ಶಾಪಮುಕ್ತನಾಗಿ ಪುತ್ರನನ್ನು ಪಡೆದ. ಆತನೇ ರಘುರಾಜ. 

ಮತ್ತೊಮ್ಮೆ ಈತ ದೇವಲೋಕಕ್ಕೆ ಹೋಗಿ ದೇವತೆಗಳನ್ನು ಸಂತೋಷಗೊಳಿಸಿದ. ಅದರಿಂದ ಪ್ರೀತರಾದ ದೇವತೆಗಳು ದಿಲೀಪನಿಗೆ ವರವನ್ನು ಬೇಡುವಂತೆ ಹೇಳಿದರು. ಆಗ ಈತ ತನಗೆ ಆಯುಷ್ಯ ಎಷ್ಟಿದೆಯೆಂದು ಕೇಳಲಾಗಿ ಅವರು ಎರಡು ಜಾವ ಮಾತ್ರವೇ ಎಂದರು. ಒಡನೆಯೇ ಈತ ಅಯೋಧ್ಯೆಗೆ ಬಂದು ಮಗನಿಗೆ ರಾಜ್ಯಭಾರ ಒಪ್ಪಿಸಿ ಯೋಗನಿರತನಾಗಿ ದೇಹತ್ಯಾಗ ಮಾಡಿದ.

ದಿಲೀಪನ ವೃತ್ತಾಂತ ಕಾಳಿದಾಸನ ರಘುವಂಶದಲ್ಲಿ ಸುಂದರವಾಗಿ ಬಂದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ